ಭಾರತದಲ್ಲಿ ಚಿನ್ನದ ಬೆಲೆ ದಿನೇದಿನೆ ಹೊಸ ದಾಖಲೆ ಸೃಷ್ಟಿಸುತ್ತಲೇ ಇದೆ. ಶುಕ್ರವಾರವಷ್ಟೇ 10 ಗ್ರಾಂಗೆ 95,420 ರೂ. ಇದ್ದ ದರ ಶನಿವಾರ 95,670 ರೂ.ಗೆ ಏರಿದೆ. 2025ರಲ್ಲೇ ಈವರೆಗೆ ಚಿನ್ನ ಸುಮಾರು 20 ಸಲ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಇದರಿಂದಾಗಿ, ಚಿನ್ನದ ಬೆಲೆ ಒಂದು ಲಕ್ಷ ರೂ.ಗೆ ಯಾವಾಗ ತಲುಪುತ್ತದೆ ಎಂಬ ಬಗ್ಗೆ ಎಲ್ಲೆಡೆ ಕುತೂಹಲ ಕಂಡುಬರುತ್ತಿದೆ.
ಏರಿಕೆಗೆ ಕಾರಣವೇನು?
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧಗಳು, ಜಗತ್ತಿನ ಎಲ್ಲ ದೇಶಗಳಿಗೆ ಅಮೆರಿಕ ನೀಡಿದ ತೆರಿಗೆ ಆಘಾತ, ಚೀನಾ ನೀಡಿದ ತಿರುಗೇಟಿನಿಂದಾಗಿ ಎರಡು ಸೂಪರ್‌ಪವರ್‌ಗಳ ಮಧ್ಯೆ ಏರ್ಪಟ್ಟಿರುವ ಶೀತಲಸಮರ ಮುಂತಾದ ಕಾರಣಗಳಿಂದಾಗಿ ಷೇರು ಮಾರುಕಟ್ಟೆಗಳು ಡೋಲಾಯಮಾನವಾಗಿವೆ. ಸಾಕಷ್ಟು ಹೂಡಿಕೆದಾರರು ಅಲ್ಲಿಂದ ಹಣ ಹಿಂತೆಗೆದುಕೊಂಡು ಸುರಕ್ಷಿತವೆಂದೇ ಪರಿಗಣಿತವಾಗಿರುವ ಚಿನ್ನದಲ್ಲಿ ಹೂಡುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಕೂಡ ಚಿನ್ನದ ಖರೀದಿ ಹೆಚ್ಚಿಸಿದೆ. ಜೊತೆಗೆ ಇದು ಮದುವೆ ಮತ್ತು ಹಬ್ಬದ ಸೀಸನ್ ಕೂಡ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿ, ಬೆಲೆ ಏರತೊಡಗಿದೆ.
2025 ಐತಿಹಾಸಿಕ ವರ್ಷ: ಚಿನ್ನದ ಬೆಲೆಗೆ 2025 ಐತಿಹಾಸಿಕ ವರ್ಷ. ಜನವರಿಯಿಂದ ಏಪ್ರಿಲ್ ವರೆಗೆ ಚಿನ್ನದ ಬೆಲೆ ಸರಾಸರಿ ಶೇ. 5ರಿಂದ 7ರಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಔನ್ಸ್‌ಗೆ 3,238 ಡಾಲರ್‌ನ ಗರಿಷ್ಠ ಮಟ್ಟದಲ್ಲಿದೆ.
ತಜ್ಞರ ಅಭಿಪ್ರಾಯವೇನು?
ಚಿನ್ನದ ಮಾರುಕಟ್ಟೆ ತಜ್ಞರು 10 ಗ್ರಾಂಗೆ 1 ಲಕ್ಷ ರೂ. ಗಡಿಯ ಬಗ್ಗೆ ಹಲವು ರೀತಿಯ ಊಹೆಗಳನ್ನು ಮಾಡಿದ್ದಾರೆ. 2025ರ ದ್ವಿತೀಯಾರ್ಧದ ವೇಳೆಗೆ ಚಿನ್ನದ ಬೆಲೆ 1 ಲಕ್ಷ ರೂ. ತಲುಪುವ ಸಾಧ್ಯತೆಯಿದೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕ ಡಾ. ರಾಜೇಶ್‌ಕುಮಾರ್. 2026ರ ವೇಳೆಗೆ ಇದು 1.2 ಲಕ್ಷ ರೂ. ತಲುಪಬಹುದು ಎಂಬುದು ಕಮಾಡಿಟಿ ತಜ್ಞೆ ಸುಮಿತಾ ರಾವ್ ಅವರ ಅಭಿಪ್ರಾಯ. 2030ರ ವೇಳೆಗೆ ಚಿನ್ನದ ಬೆಲೆ 1.68 ಲಕ್ಷ ರೂ. ತಲುಪಬಹುದೆಂದು ಕೆಲವು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಹತ್ತಿರವಾದ ಲಕ್ಷದ ಗಡಿ?
ಆರ್ಥಿಕ ಕ್ಷೇತ್ರದಲ್ಲಿ ಅನಿಶ್ಚಿತತೆ ತಲೆದೋರಿದಾಗಲೆಲ್ಲ ಚಿನ್ನದ ಬೆಲೆ ಹೆಚ್ಚಿದೆ. ಈಗ ಆಗುತ್ತಿರುವುದೂ ಅದೇ. ಈಗಿನ ಬೆಳವಣಿಗೆ ನೋಡಿದರೆ ಸದ್ಯದಲ್ಲೇ 1 ಲಕ್ಷ ರೂ. ತಲುಪುವುದು ಗ್ಯಾರಂಟಿ ಎನ್ನುತ್ತಾರೆ ಕಾಮಾ ಜುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಶಾ. ‘ಚಿನ್ನಕ್ಕೆ ಗರಿಷ್ಠ ಮಿತಿ ಎಂಬುದೇ ಇಲ್ಲ. ಅದು ಬೆಳೆಯುತ್ತಲೇ ಇರುತ್ತದೆ’ ಎಂಬುದು ಮೋತಿಲಾಲ್ ಓಸ್ವಾಲ್ ಕಂಪನಿಯ ಕಿಶೋರ್ ನಾರ್ನೆ ಅವರ ಅಭಿಮತ.
ಲಕ್ಷದ ಗಡಿಯ ಲೆಕ್ಕಾಚಾರವೇನು?
ಪ್ರಸ್ತುತ ದರ 10 ಗ್ರಾಂಗೆ ಸುಮಾರು 95,670 ರೂ. ಇದೆ. 1 ಲಕ್ಷ ರೂ. ದಾಟಲು 5,000 ರೂ. (ಸುಮಾರು ಶೇ. 5ರಷ್ಟು) ಏರಿಕೆ ಬೇಕು. ಸರಾಸರಿ ಏರಿಕೆ ವೇಗ 2025ರಲ್ಲಿ ತಿಂಗಳಿಗೆ ಶೇ. 2-3ರಷ್ಟು ಏರಿಕೆ ಕಂಡುಬಂದಿದೆ.
ಈ ವೇಗದಲ್ಲಿ ಮುಂದುವರಿದರೆ, 2025ರ ಮೇ ಅಂತ್ಯ ಅಥವಾ ಜೂನ್‌ಗೆ ಅಂದರೆ 50-80 ದಿನಗಳಲ್ಲಿ ಚಿನ್ನದ ಬೆಲೆ 1 ಲಕ್ಷ ರೂ. ತಲುಪಬಹುದು. ಆದರೆ, ಭೌಗೋಳಿಕ ರಾಜಕೀಯ ಘಟನೆಗಳು ಅಥವಾ ಹಣದುಬ್ಬರದ ಒತ್ತಡ ಹೆಚ್ಚಿದರೆ, ಇದು 2025ರ ಜೂನ್ ತಿಂಗಳಲ್ಲೇ ತಲುಪಬಹುದು. ಷೇರು ಮಾರುಕಟ್ಟೆ ಏರಿಳಿತ, ಜಾಗತಿಕ ವ್ಯಾಪಾರ ಸಮರ ಮತ್ತಷ್ಟು ತೀವ್ರಗೊಂಡರೆ ಇನ್ನು ಕೆಲವೇ ದಿನಗಳಲ್ಲಿ, ಅಂದರೆ ಮೇ ಅಂತ್ಯದೊಳಗೆ ಲಕ್ಷದ ಗಡಿ ದಾಟಬಹುದು.
ಎಲ್ಲರೂ ಒಪ್ಪುವುದಿಲ್ಲ?
ಕೆಲವೇ ತಿಂಗಳುಗಳಲ್ಲಿ ಚಿನ್ನದ ಬೆಲೆ ₹1 ಲಕ್ಷ ತಲುಪುತ್ತದೆ ಎಂಬುದನ್ನು ಎಲ್ಲರೂ ಒಪ್ಪುವುದಿಲ್ಲ. ‘ಜಾಗತಿಕ ವ್ಯಾಪಾರ ವಲಯದಲ್ಲಿನ ಪ್ರಕ್ಷುಬ್ಧ ಸ್ಥಿತಿ, ಬ್ಯಾಂಕ್ ಬಡ್ಡಿ ದರ ಕಡಿತ ಮುಂತಾಗಿ ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳೆಲ್ಲವೂ ಈಗಾಗಲೇ ಸಂಭವಿಸಿ, ಪರಿಸ್ಥಿತಿ ಒಂದು ಹಂತಕ್ಕೆ ಬಂದುಬಿಟ್ಟಿದೆ. ಮತ್ತೆ ಹೊಸದಾಗಿ ಅಂತಹ ಪ್ರಚೋದಕ ಸನ್ನಿವೇಶಗಳು
ಬಂದರೆ ಮಾತ್ರ ಬಂಗಾರದ ಬೆಲೆ ₹1 ಲಕ್ಷಕ್ಕೆ ತಲುಪಬಹುದು’ ಎನ್ನುತ್ತಾರೆ ಅಬಾನ್ಸ್ ಫೈನಾನ್ಸಿ ಯಲ್ ಸರ್ವಿಸಸ್‌ನ ಸಿಇಒ ಚಿಂತನ್ ಮೆಹ್ರಾ. ‘ಲಕ್ಷಕ್ಕೆ ಏರುವುದಿರಲಿ, ಈಗಿರುವ ಬೆಲೆಯೇ ಶೇ. 30-40ರಷ್ಟು ಇಳಿಯಬಹುದು. ಹೆಚ್ಚುತ್ತಿರುವ ಪೂರೈಕೆ, ಮಾರುಕಟ್ಟೆ ಯಲ್ಲಿ ಆಗಬಹುದಾದ ಸ್ಯಾಚು ರೇಷನ್ ಇದಕ್ಕೆ ಕಾರಣ ವಾಗಬಹುದು’ ಎಂಬುದು ಮಾರ್ನಿಂಗ್ ಸ್ಟಾರ್ ಫೈನಾನ್ಸಿಯಲ್ ಸರ್ವಿಸಸ್‌ನ ಸ್ಟ್ರಾಟೆಜಿಸ್ಟ್ ಜಾನ್ ಮಿಲ್ಸ್ ಅವರ ಅಭಿಪ್ರಾಯ.
ಚಿನ್ನ ಖರೀದಿಗೆ ಸಕಾಲವೇ?
ಸುರಕ್ಷಿತ ಹೂಡಿಕೆ, ನಿರಂತರ ಬೇಡಿಕೆ ಎಂಬುದು ಚಿನ್ನದ ವಿಷಯದಲ್ಲಿ ಸತ್ಯವಾದರೂ ಲಾಭದ ಆಸೆಗಾಗಿ ಅಗತ್ಯಕ್ಕಿಂತ ದೊಡ್ಡ ಪ್ರಮಾಣದಲ್ಲಿ ಖರೀದಿಸುವುದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಷೇರು ಮಾರುಕಟ್ಟೆಗಿಂತ ಚಿನ್ನವೇ ಒಳ್ಳೆಯದೆಂದು ದೊಡ್ಡ ಮೊತ್ತ ಹೂಡುವವರು ಹಿಂದಿನ ಅಂಕಿಅಂಶ ಗಮನಿಸಬೇಕು.
1999ರಿಂದ ಈವರೆಗೆ ಚಿನ್ನದ ಬೆಲೆ ಶೇ. 1.73ರಿಂದ ಶೇ. 17.44ರವರೆಗೆ ಏರಿದ್ದರೂ ಈ ಅವಧಿಯಲ್ಲಿ ವಿಪರೀತ ಹೊಯ್ದಾಟಕ್ಕೆ ಸಾಕ್ಷಿಯಾಗಿದೆ. ಪ್ರತಿಯಾಗಿ ನಿಫ್ಟಿ-50 ಸೂಚ್ಯಂಕ ಕಳೆದ 2 ದಶಕಗಳಲ್ಲಿ ಶೇ. 9.67ರಿಂದ ಶೇ. 18.78ರಷ್ಟು ಏರಿಕೆ ದಾಖಲಿಸಿದ್ದು, ಹೆಚ್ಚಿನ ಹೊಯ್ದಾಟ ಅನುಭವಿಸದೆ ಹೂಡಿಕೆದಾರರಿಗೆ ಸ್ಥಿರ ಮತ್ತು ನಿರಂತರ ಲಾಭ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಹೂಡಿಕೆಗಳ ಮಧ್ಯೆ ಸಮತೋಲನ ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಆನಂದ್ ರಾಥಿ ವೆಲ್ತ್ ಲಿ.ನ ಸಂಶೋಧನಾ ನಿರ್ದೇಶಕ ಚೇತನ್ ಶೆಣೈ.
ಇದನ್ನು ಓದಿ:ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್ ಉಚಿತ ಮನೆಗಾಗಿ ಅರ್ಜಿ ಸಲ್ಲಿಸೋದು ಹೇಗೆ ಗೊತ್ತಾ?
https://krushiyogi.com/archives/1206
ಇದನ್ನು ಓದಿ:NABARD Loan ಕೃಷಿ ಲೋನ್ ಸಾಲ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ
https://krushiyogi.com/archives/1202
Leave A Comment