ಕಾಲು ಮತ್ತು ಬಾಯಿ ಬೇನೆ ರೋಗಗಳಿಗೆ ಲಸಿಕೆಯ ಪ್ರಾರಂಭ

WhatsApp Group Join Now
Telegram Group Join Now

ಆತ್ಮೀಯ ರೈತ ಬಾಂಧವರೇ, ನಮ್ಮ ಮನೆಯಲ್ಲಿ ದನಗಳಿವೆ? ಕೂಡಲೇ ಈ ಕೆಲಸವನ್ನು ಮಾಡಿ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ  5ನೇ ಸುತ್ತಿನ ಕಾಲು ಬಾಯಿ ಲಸಿಕಾ ಕಾರ್ಯಕ್ರಮವನ್ನು ಏ. 1ರಿಂದ ಪ್ರಾರಂಭಿಸಲಾಗುತ್ತಿದ್ದು, ರೈತರು ತಮ್ಮ ದನಕರು, ಎಮ್ಮೆಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ತಿಳಿಸಿದ್ದಾರೆ. ಕಾಲು-ಬಾಯಿ ಜ್ವರವು ದನ, ಎಮ್ಮೆ, ಹಂದಿ, ಜಿಂಕೆ ಮತ್ತು ಇತರೆ ಸೀಳು ಗೊರಸಿನ ರಾಸುಗಳಲ್ಲಿ ಪಿಕಾರ್ನೋ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗವು ಅಂಟು ಜಾಡ್ಯವಾಗಿದ್ದು, ರೋಗಗ್ರಸ್ತ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ರಾಸುವಿನಿಂದ ರಾಸುವಿಗೆ ಹರಡುತ್ತದೆ.


ಕಾಲು-ಬಾಯಿ ಜ್ವರದ ರೋಗೋದ್ರೇಕಗಳಲ್ಲಿ ಕೆಲವೊಮ್ಮೆ ಜಾನುವಾರುಗಳು ಮರಣವನ್ನಪ್ಪುತ್ತವೆ. ರೋಗದಿಂದ ಚೇತರಿಸಿಕೊಂಡ ರಾಸುಗಳ ಉತ್ಪನ್ನ ಸಾಮರ್ಥ್ಯ ಕಡಿಮೆಯಾಗುವುದಲ್ಲದೆ, ಹಸು ಅಥವಾ ಎಮ್ಮೆಗಳಲ್ಲಿ ಗರ್ಭಕಟ್ಟುವ ತೊಂದರೆಗಳು ಉಂಟಾಗುತ್ತವೆ. ಗರ್ಭಪಾತ ಉಂಟಾಗುವ ಸಂಭವವಿರುತ್ತದೆ. ಹೋರಿ/ಎತ್ತುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸುತ್ತದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ ಕಾಲು-ಬಾಯಿ ಜ್ವರದ ವಿರುದ್ದ ನಿಯಮಿತವಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗವನ್ನು ತಹಬಂದಿಗೆ ತರಬಹುದಾಗಿದೆ. ಈ ಹಿನ್ನೆಲೆಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ರಾಜ್ಯಾದ್ಯಂತ 5ನೇ ಸುತ್ತಿನ ಕಾಲುಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಏ. 1ರಿಂದ 30 ರವರೆಗೆ ಹಮ್ಮಿಕೊಂಡಿದೆ.


ಜಿಲ್ಲೆಯಲ್ಲಿ 2.76 ಲಕ್ಷ ಜಾನುವಾರುಗಳಿದ್ದು, ಈಗಾಗಲೇ ತಯಾರಿಸಿದ ತಾಲ್ಲೂಕುವಾರು, ಗ್ರಾಮವಾರು ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ಪಶುಪಾಲನಾ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ಲಸಿಕಾ ತಂಡಗಳಿಂದ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಲಸಿಕೆ ಹಾಕುವುದರಿಂದ ಹಾಲು ಕಡಿಮೆ ಅಥವಾ ಗರ್ಭಪಾತವಾಗುವುದಾಗಲೀ ಆಗಲ್ಲ. ಯಾವುದೇ ಮೂಢನಂಬಿಕೆ ಅಥವಾ ತಪ್ಪು ಗ್ರಹಿಕೆಗೆ ಒಳಗಾಗದೆ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

WhatsApp Group Join Now
Telegram Group Join Now

Leave a Comment